Powered By Blogger

Sunday, June 27, 2010

ಹಲೋ... ಕ್ರೆಡಿಟ್‌ ಬೇಕಾ?



ಸೋಮವಾರವೆಂದರೆ ಭಾನುವಾರದ ಹ್ಯಾಂಗೋವರ್‌. ‘ಬೋರಿಂಗ್‌.. ಬೋರಿಂಗ್‌..’ ಎಂದು ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಕೂತ ಆತ ಆಕಳಿಸುತ್ತಿದ್ದಾಗಲೇ ಜೇಬಲ್ಲಿದ್ದ ಮೊಬೈಲ್‌ ರಿಂಗ್‌ ಆಯ್ತು. ಖುಷಿಯಾಗಿ ‘ಹಲೋ’ ಎಂದರೆ, ಆ ಕಡೆಯಿಂದ ಅಪರಿಚಿತ ಹೆಣ್ಣು ಸ್ವರ ‘ಹೆಲೋ್ಲ’ ಎಂದು ಉಲಿಯಿತು.
‘ಸರ್‌, ನಾನು ಎಡಿಎಸಿಸಿ ಬ್ಯಾಂಕ್‌ನಿಂದ ಮಾತನಾಡೋದು. ನಮ್ಮ ಹೊಸ ಗೋಲ್ಡನ್‌ ಕ್ರೆಡಿಟ್‌ ಕಾರ್ಡ್‌ಗೆ ಒಳ್ಳೆಯ ಆಫರ್‌ ಇದೆ ಸರ್‌. ಮಾಸಿಕ ಮಿತಿ ಹೆಚ್ಚಳ, ಬಡ್ಡಿದರ ಕಡಿಮೆ. ಇನ್ನೂ ಏನೇನೆಲ್ಲಾ.. ಸರ್‌, ಒಂದೆರಡು ನಿಮಿಷ ಫ್ರೀ ಇದೀರಾ? ಒಂದಿಷ್ಟು ವಿವರ...’
‘ಓ ಖಂಡಿತ. ನೋಡಿ, ನಂಗೆ ಈ ಕ್ರೆಡಿಟ್‌ ಕಾರ್ಡ್‌ ಅಗತ್ಯ ಎಷ್ಟಿದೆ ಎಂದ್ರೆ ನಾನೇ ಕಾಲ್‌ ಮಾಡುವವನಿದ್ದೆ. ಅಷ್ಟರಲ್ಲಿ ನೀವೇ ಮಾಡಿಬಿಟ್ರಿ. ಆದ್ರೆ ನಂಗೆ 5 ಗಂಟೆಗೆ ಮೀಟಿಂಗ್‌ ಇದೆ. ಇರಲಿ, ಈಗಿನ್ನೂ 2 ಗಂಟೆ. ಹೇಳಿ ಹೇಳಿ’ ಈತ ಮೊಬೈಲನ್ನು ಕಿವಿಗೊತ್ತಿ ರೆಡಿಯಾಗಿಬಿಟ್ಟ.
‘ಓ ತುಂಬಾ ಥ್ಯಾಂಕ್ಸ್‌ ಸರ್‌. ಈ ಕಾರ್ಡ್‌ ನಿಮಗೆ ಎಷ್ಟೊಂದು ಪ್ರಯೋಜನಕಾರಿ ಅಂದ್ರೆ ಬಳಸಿದಷ್ಟೂ ಡಿಸ್ಕೌಂಟ್‌, ಜೇಬೆಲ್ಲಾ ಖಾಲಿ ಇದ್ರೂ ಷಾಪಿಂಗ್‌ ಮಾಡಬಹ್ದು....’
‘ಓಕೆ, ತುಂಬಾ ಒಳ್ಳೇದು, ನಂಗದೇ ಬೇಕು’
‘ಇಎಂಐ ಕೂಡಾ ತುಂಬಾ ಆಕರ್ಷಕ ಸರ್‌...’
‘ವಾವ್‌!’
ಹೀಗೆ ಸಾಗಿತು ಕಾರ್ಡ್‌ನ ಗುಣಗಾನ. ಅದೂ ಬರೋಬ್ಬರಿ ಎರಡೂವರೆ ಗಂಟೆ ಕಾಲ. ಕೊನೆಗೆ ಆಕೆ ಇದ್ದಬದ್ದ ಮಾಧುರ‍್ಯವನ್ನೆಲ್ಲ ಸ್ವರದಲ್ಲಿ ಬೆರೆಸಿ ಕೇಳಿದಳು, ‘ಸರ್‌, ಆ ಕಾರ್ಡ್‌ ಬೇಕಲ್ಲ ನಿಮಗೆ?’
‘ಆಫರ್‌ ತುಂಬಾ ಚೆನ್ನಾಗಿದೆ. ಆದರೆ ನಂಗೆ ಯೋಚಿಸಲು ಟೈಂ ಕೊಡಿ. ಅರೆ, ನಾಲ್ಕೂವರೆ ಆಗೇ ಬಿಡ್ತಲ್ಲ. ಮೀಟಿಂಗ್‌ಗೆ ಹೋಗಬೇಕು. ನೀವೇನೂ ತಿಳಿದುಕೊಳ್ಳದಿದ್ದರೆ ನಾಳೆ ನನ್ನ ನಿರ್ಧಾರ ಹೇಳಲಾ?’
‘ನೋ ಪ್ರಾಬ್ಲಂ ಸರ್‌. ನಾಳೆ ಫೋನ್‌ ಮಾಡ್ತೇನೆ. ಹ್ಯಾವ್‌ ಎ ನೈಸ್‌ ಡೇ’
ಮರುದಿನವೂ ಅದೇ ಟೈಮಿನಲ್ಲಿ ಫೋನ್‌ ಬಂತು. ಬೇರೆ ಬ್ಯಾಂಕಿನ ಕಾರ್ಡಿನ ಜೊತೆ ಆಕೆ ಆಫರ್‌ ಮಾಡಿರುವ ಎಡಿಎಸಿಸಿ ಬ್ಯಾಂಕ್‌ ಕಾರ್ಡನ್ನು ಹೋಲಿಸಿ ವಿವರಿಸಲು ಕೇಳಿದ. ಆಕೆ ವಿವಿಧ ಅಂಕಿ- ಅಂಶ, ವೆಬ್‌ಸೈಟ್‌ ಎಲ್ಲವನ್ನೂ ಜಾಲಾಡಿ ವಿವರಿಸಿದ್ದೇ ವಿವರಿಸಿದ್ದು. ಒಂದೂವರೆ ತಾಸು ಕಾರ್ಡಿನ ಪ್ರವರ ಸಾಗಿತು.
‘ಓ ತುಂಬಾ ಚೆನ್ನಾಗಿದೆ. ಆದರೆ ನಾನೊಬ್ಬ ಎಂಜಿನಿಯರ್‌. ಯಾವ ವಸ್ತುವಿನಲ್ಲೂ ಕುಂದಿರಬಾರದು ನೋಡಿ. ನಾಳೆ ಮತ್ತೆ ಫೋನ್‌ ಮಾಡಿ ಕಾರ್ಡ್‌ನಲ್ಲಿರುವ ರಿಸ್ಕ್‌ ಫ್ಯಾಕ್ಟರ್‌ ವಿವರಿಸಿದ್ರೆ ಒಳ್ಳೆಯದಿತ್ತು’
‘ಓಕೆ ಸರ್‌, ನೋ ಪ್ರಾಬ್ಲಂ’ ಎಂದಾಕೆಯ ದನಿಯಲ್ಲಿ ಸ್ವಲ್ಪ ಅಸಹನೆ ಇತ್ತು.
ನಂತರದ ಎರಡು ದಿನಗಳ ಕಾಲ ಮತ್ತೆ ಆಕೆ ಫೋನ್‌ ಮಾಡಿ ರಿಸ್ಕ್‌, ಮುಂದೆ ಕಾರ್ಡ್‌ಗೆ ಹೆಚ್ಚಿಸುವ ಹಣದ ಮಿತಿ, ವಿದೇಶಗಳಿಗೆ ಹೋದರೆ ಏನು ಪ್ರಯೋಜನ ಸಿಗುತ್ತದೆ ಎಂದೆಲ್ಲ ವಿವರಿಸಿದಳು.
‘ಸರ್‌, ಈಗ ನಮ್ಮ ಕಾರ್ಡ್‌ ತೆಗೆದುಕೊಳ್ಳಬಹುದಲ್ಲ?’
‘ಆಫರ್‌ ಏನೋ ಚೆನ್ನಾಗಿದೆ. ಆದರೆ ಸದ್ಯಕ್ಕೆ ನನಗೆ ಆ ಕಾರ್ಡ್‌ ಬೇಡ. ಐ ಆ್ಯಮ್‌ ಸ್ಸಾರಿ’
‘ಆದರೆ ಸರ್‌, ನೀವು ಆವತ್ತು ಕಾರ್ಡ್‌ ಅಗತ್ಯವಿದೆ ಅಂದ್ರಲ್ಲ..’
‘ಹೌದು, ಅವತ್ತು ಇತ್ತು; ಆದ್ರೆ ಈಗಿಲ್ಲ’
ನಿರಾಶೆಯಾದರೂ ಆಕೆ ಎಂದಳು, ‘ಓಕೆ, ಆದ್ರೆ ನಾನು ನಿಮಗೆ ಒಂದು ಫಾರ್ಮ್‌ ಕಳಿಸ್ತೇನೆ. ಅದ್ರಲ್ಲಿ ಕಾರ್ಡ್‌ ಏಕೆ ಬೇಡ ಎಂಬುದಕ್ಕೆ ಕಾರಣ ನಮೂದಿಸಿ ಬಿಡಿ. ನಾನು ಅದನ್ನು ನಮ್ಮ ಬಾಸ್‌ಗೆ ಕೊಡಬೇಕು’
ಓಕೆ ಎಂದನಾತ. ಮರುದಿನ ಆತ ತುಂಬಿ ಕಳಿಸಿದ ಫಾರ್ಮ್‌ ಓದಿದ ಆಕೆಗೆ ಕೊಂಚ ಸಿಟ್ಟೇ ಬಂತು. ಜೊತೆಗೆ ಅಚ್ಚರಿ. ‘ಬೇಡ ಎನ್ನಲು ಕಾರಣ’ ಎಂದಿದ್ದ ಕಡೆ, ‘ನನ್ನ ಹೆಂಡತಿ ತವರಿನಿಂದ ವಾಪಸ್ಸು ಬಂದಿದ್ದರಿಂದ ಅದು ನನಗೆ ಬೇಕಿಲ್ಲ’ ಎಂದು ಬರೆದಿದ್ದ.
ಗೊಂದಲಗೊಂಡ ಆಕೆ ಫೋನಾಯಿಸಿ ಕೇಳೇ ಬಿಟ್ಟಳು, ‘ಸರ್‌, ಕಾರ್ಡ್‌ ಬೇಡ ಎಂದಿದ್ದಕ್ಕೆ ನೀಡಿದ ಕಾರಣ ನನಗೆ ಅರ್ಥ ಆಗಲಿಲ್ಲ, ದಯವಿಟ್ಟು ವಿವರಿಸ್ತೀರಾ?’
‘ಓ ಅದಾ! ನಾನು ಹೊಸ ಡರ್ಬಿನ್‌ ಮೊಬೈಲ್‌ ಸಿಮ್‌ ಖರೀದಿಸಿದ್ದೇನೆ. ಪ್ರತಿಯೊಂದು ಒಳ ಬರುವ ಕರೆಗೂ ಒಂದು ನಿಮಿಷಕ್ಕೆ 20 ಪೈಸೆ ನನ್ನ ಅಕೌಂಟ್‌ಗೆ ಸೇರುತ್ತೆ. ನೀವು ಫೋನ್‌ ಮಾಡಿದಾಗ ಪ್ರತಿ ದಿನ ನನಗೆ ಸರಾಸರಿ 25 ರೂಪಾಯಿ ಬಂದಿದೆ. ನಾನದನ್ನು ತವರಿನಲ್ಲಿರುವ ಹೆಂಡತಿಗೆ ಫೋನ್‌ ಮಾಡಲು ಬಳಸಿದೆ. ಈಗ ಆಕೆ ವಾಪಸ್ಸು ಬಂದಿದ್ದಾಳೆ. ನಿಮ್ಮ ಕ್ರೆಡಿಟ್‌ ಕಾರ್ಡ್‌ ನಿಜವಾಗಲೂ ನನ್ನ ಸಿಮ್‌ಗೆ ಹಣ ಕ್ರೆಡಿಟ್‌ ಮಾಡ್ತು. ತುಂಬ ಉಪಯೋಗವಾಯ್ತು’ ಎಂದನಾತ!

No comments:

Post a Comment