


ಎರೆಹುಳುವನ್ನು ಅರ್ಧಕ್ಕೆ ಕತ್ತರಿಸಿದರೆ ಪ್ರತಿ ಭಾಗವೂ ಪ್ರತ್ಯೇಕ ಹುಳುವಾಗಿ ಬೆಳೆಯುತ್ತದೆ.
ತಪ್ಪು. ಅನೇಕ ಜಾತಿಯ ಹುಳುಗಳ ಬಾಲದ ಭಾಗ ತುಂಡಾದರೆ, ಅದು ಮತ್ತೆ ಬೆಳೆಯುತ್ತದೆ. ಹಕ್ಕಿಗಳ ದಾಳಿಯಿಂದಲೋ, ಕಾಲ್ತುಳಿತದಿಂದಲೋ ಹೀಗೆ ಆಗುವುದು ಸಾಮಾನ್ಯ. ತುಂಡಾಗುವ ಬಾಲ ಮತ್ತೆ ಬೆಳೆಯುತ್ತದೆ ಎಂಬುದೇನೋ ಸತ್ಯ. ಆದರೆ, ಹಾಗೆ ತುಂಡಾದ ಬಾಲಕ್ಕೆ ತಲೆ ಖಂಡಿತ ಮೂಡುವುದಿಲ್ಲ. ಹಾಗಾಗಿ ಆ ಭಾಗ ಮೃತ ಎಂದೇ ಅರ್ಥ.
ವಿಶ್ವದ ಎಲ್ಲಾ ಇರುವೆಗಳ ತೂಕವು ಭೂಮಿ ಮೇಲಿನ ಮನುಷ್ಯರ ತೂಕಕ್ಕೆ ಸಮ.
ಈ ಹೇಳಿಕೆ ಸತ್ಯ. ಕೀಟಶಾಸ್ತ್ರಜ್ಞ ಇ.ಒ.ವಿಲ್ಸನ್ ನಡೆಸಿರುವ ಸಂಶೋಧನೆ ಇದನ್ನು ದೃಢಪಡಿಸಿದೆ. ಭೂಮಿ ಮೇಲೆ ಅಂದಾಜು ಹತ್ತು ಶತಕೋಟಿ ಇರುವೆಗಳಿವೆ. ಅವುಗಳೆಲ್ಲವುಗಳ ತೂಕ ಮನುಷ್ಯರ ತೂಕಕ್ಕೆ ಸರಿಸಮನಾಗಬಲ್ಲದು. ಯಾಕೆಂದರೆ, 16 ಲಕ್ಷ ಇರುವೆಗಳ ತೂಕ ಒಬ್ಬ ಮನುಷ್ಯನ ತೂಕಕ್ಕೆ ಸಮ.
ಅದೋ... ಪಟದ ಹಡಗು
ಸಮುದ್ರಗಳಲ್ಲಿ ಅನೇಕ ಬೃಹತ್ ಹಡಗುಗಳು ನಿತ್ಯವೂ ಸಂಚರಿಸುತ್ತವೆ. ಲಕ್ಷಗಟ್ಟಲೆ ಟನ್ ಇಂಧನವನ್ನು ಬಳಸುವ ಅವು ವಿಷಕಾರಿ ಅನಿಲವನ್ನು ಹೊರಸೂಸುತ್ತವೆ. ಪರಿಸರ ಮಾಲಿನ್ಯದ ಕೊಡುಗೆಯಲ್ಲಿ ಇದಕ್ಕೇ ಮೂರನೇ ರ‍್ಯಾಂಕ್! ಜರ್ಮನ್‌ನ ಎಂಜಿನಿಯರ್‌ಗಳು ಇದನ್ನು ತಪ್ಪಿಸಲು ಬೃಹತ್ ಗಾಳಿಪಟ ಹಾಕಿದ ಹಡಗುಗಳನ್ನು ಅಭಿವೃದ್ಧಿಪಡಿಸಿದ್ದು, ಅವು ಗಾಳಿಯಿಂದ ಚಲಿಸಬಲ್ಲವು.
‘ಏರೋಡೈನಾಮಿಕ್ಸ್’ ತತ್ವದ ಆಧಾರದ ಮೇಲೆ ವಿಜ್ಞಾನಿಗಳು ಈ ಹಡಗನ್ನು ಅಭಿವೃದ್ಧಿಪಡಿಸಿದ್ದಾರೆ. ಇಂಗಾಲದ ಫೈಬರ್‌ನಿಂದ ತಯಾರಿಸಿದ ದಪ್ಪನೆಯ ಜವಳಿಯನ್ನು ಉಪಯೋಗಿಸಿ ದೊಡ್ಡ ಗಾಳಿಪಟ ಸಿದ್ಧಪಡಿಸಿದ್ದಾರೆ. ಗಾಳಿಗೊಡ್ಡಿಕೊಂಡಾಗ ಈ ಪಟದ ಮೇಲ್ಮೈನ ಅಗಲ ಒಂದು ಫುಟ್‌ಬಾಲ್ ಕ್ರೀಡಾಂಗಣಕ್ಕೆ ಸಮನಾಗಿರುತ್ತದೆ! 500 ಮೀಟರ್ ಎತ್ತರದವರೆಗೆ ಪಟ ಹಾರಬಲ್ಲದು. ಗಾಳಿಯ ಚಲನೆಗೆ ತಕ್ಕಂತೆ ಹಡಗಿನ ವೇಗವನ್ನು ನಿಯಂತ್ರಿಸುವ ಉಪಕರಣವೂ ಪಟದ ಕೆಳಭಾಗದಲ್ಲಿ ಇರುತ್ತದೆ. ಅದನ್ನು ಹಡಗಿನ ನಿಯಂತ್ರಣ ಕೋಣೆಯಲ್ಲಿರಿಸಿದ ಕಂಪ್ಯೂಟರ್‌ನೊಟ್ಟಿಗೆ ಸಂಪರ್ಕಿಸಿರುತ್ತಾರೆ. ಬೃಹತ್ ಪಟದ ಹಡಗುಗಳನ್ನು ಈಗಾಗಲೇ ಪ್ರಯೋಗಾರ್ಥವಾಗಿ ಸಮುದ್ರಗಳ ಮೇಲೆ ಸಂಚರಿಸಿ ಆಗಿದೆ. ಫಲಿತಾಂಶ ಉತ್ತಮವಾಗಿಯೇ ಇದೆ.

No comments:
Post a Comment