



ಅಳಿಲು
ಮರಗಳ ಮೇಲೆ ಓಡುವ ಅಳಿಲು ನಮಗೆ ಪರಿಚಿತ ಪ್ರಾಣಿ. ಸಾಕಷ್ಟು ರೀತಿಯ ಅಳಿಲುಗಳಿವೆ. ಇಲಿಯಷ್ಟು ಚಿಕ್ಕ, ಬೆಕ್ಕಿನಷ್ಟು ದೊಡ್ಡ ಅಳಿಲನ್ನು ನೋಡಬಹುದು. ಸಮಾನ್ಯವಾಗಿ ನೆಲದ ಅಳಿಲುಗಳು ಮತು ಮರದ ಅಳಿಲುಗಳು ಎಂದು ಎರಡು ಬಗೆಯ ಅಳಿಲುಗಳಿವೆ. ಮರದಿಂದ ಮರಕ್ಕೆ ನೆಗೆಯುವ ಅಳಿಲುಗಳನ್ನು ಆಸ್ಟ್ರೇಲಿಯಾ ಹೊರತುಪಡಿಸಿ ಎಲ್ಲಾ ದೇಶಗಳಲ್ಲಿಯೂ ನೋಡಬಹುದು.
ಕಳ್ಳ ಕಾಗೆಗಳು
ಕಪ್ಪಾದ ಒರಟು ರೆಕ್ಕೆಗಳ ಕಾಗೆಗಳು ಕಳ್ಳತನದಲ್ಲಿ ಎತ್ತಿದ ಕೈ. ಯಾರೂ ಇಲ್ಲದಾಗ ಇಣುಕುವ ಕಾಗೆಗಳು ಕ್ಷಣ ಮಾತ್ರದಲ್ಲಿ ತನಗೆ ಬೇಕಾದ ವಸ್ತುಗಳನ್ನು ಕದ್ದು ಪರಾರಿಯಾಗುತ್ತವೆ. ಪಕ್ಷಿಗಳ ಗೂಡುಗಳಿಂದ ಮೊಟ್ಟೆಗಳನ್ನು ಅಷ್ಟೇ ಅಲ್ಲ, ಮರಿಗಳನ್ನು ಎತ್ತಿಕೊಂಡು ಹೋಗುವ ಕಾಗೆಗಳನ್ನು ರೈತರ ಶತ್ರು ಎಂದೂ ಪರಿಗಣಿಸಲಾಗುತ್ತದೆ. ಹೊಲಗಳಲ್ಲಿ ಕಾಳು ಮತ್ತು ಬೆಳೆಗಳನ್ನು ತಿಂದು ರೈತರಿಗೆ ಕಾಟ ಕೊಡುವ ಅವು ಕೊಳೆತ ಪ್ರಾಣಿ, ಪಕ್ಷಿಗಳನ್ನು ತಿಂದು ನಿಸರ್ಗವನ್ನು ಸ್ವಚ್ಛ ಕೂಡ ಮಾಡುತ್ತದೆ.
ಸಾಮಾನ್ಯವಾಗಿ ಕಾಗೆಗಳು ವಲಸೆ ಹೋಗುವುದಿಲ್ಲ. ಕೆಲವು ಕಾಗೆಗಳು ಚಳಿಗಾಲದಲ್ಲಿ ದಕ್ಷಿಣ ದಿಕ್ಕಿಗೆ ಹೋಗುತ್ತವೆ. ಅವುಗಳ ದೃಷ್ಟಿ ಮತ್ತು ಶ್ರವಣ ತುಂಬಾ ಸೂಕ್ಷ್ಮವಾಗಿರುತ್ತದೆ. ಒಗ್ಗಟ್ಟಿಗೆ ಮತ್ತೊಂದು ಹೆಸರು ಎಂದು ಕಾಗೆ ಬಳಗವನ್ನು ಕರೆಯಲಾಗುತ್ತದೆ. ಅಷ್ಟೇ ಅಲ್ಲ ಅವು ಅಪಾಯವನ್ನು ಬಹುಬೇಗ ಗುರುತಿಸುತ್ತವೆ.
ಸಮುದ್ರ ಕುದುರೆ
ಇದು ಸಮುದ್ರ ಕುದುರೆ. ಕುದುರೆಯನ್ನು ಹೋಲುವ ಮುಖ ಮತ್ತು ಕತ್ತಿನ ಭಾಗ ಹೊಂದಿರುವ ಇದು ಸಾಗರ ಜೀವಿ. ಉಷ್ಣ ಮತ್ತು ಸಮಶೀತೋಷ್ಣ ಹವೆ ಇರುವ ಸಮುದ್ರಗಳಲ್ಲಿ ಕಂಡು ಬರುವ ಇದು ಮೀನಿನ ಜಾತಿಗೆ ಸೇರಿದೆ. ಇದರ ದೇಹ ಒರಟಾಗಿರುತ್ತದೆ. ಬಾಲ ಹಾವಿನ ಬಾಲವನ್ನು ಹೋಲುತ್ತದೆ. ಬೆನ್ನಿನ ಮೇಲೆ ಇರುವ ಒಂದೇ ಒಂದು ರೆಕ್ಕೆಯಿಂದ ಇದು ಈಜಬಲ್ಲದು. ಇವು ಕಡಲಲ್ಲಿರುವ ಕಳೆಗಳಿಗೆ ತಮ್ಮ ಬಾಲವನ್ನು ಸುತ್ತಿಕೊಂಡು ವಿಶ್ರಾಂತಿ ಪಡೆಯುತ್ತವೆ. ಕಂದು, ಹಳದಿ ಬಣ್ಣಗಳಲ್ಲಿ ಕಾಣಸಿಗುವ ಈ ಸಮುದ್ರ ಕುದುರೆಗಳು ತಮ್ಮ ಮರಿಗಳನ್ನು ತುಂಬಾ ಕಾಳಜಿಯಿಂದ ಕಾಪಾಡುತ್ತವೆ. ಹೆಣ್ಣು ತಾನು ಹೆತ್ತ ಮೊಟ್ಟೆಗಳನ್ನು ಗಂಡಿನ ಬಾಲದ ಬಳಿ ಇರುವ ಚೀಲದಲ್ಲಿ ಹಾಕುತ್ತದೆ. ಅಲ್ಲಿನ ಶಾಖಕ್ಕೆ ಮೊಟ್ಟೆಗಳಿಂದ ಮರಿಗಳು ಹೊರಬರುತ್ತವೆ.
ಸಾಮಾನ್ಯವಾಗಿ ಸಮುದ್ರ ಕುದುರೆಗಳು ಮೀನಿನ ಮೊಟ್ಟೆ ಮತ್ತು ಸಣ್ಣಪುಟ್ಟ ಪ್ರಾಣಿಗಳನ್ನು ತಿನ್ನುತ್ತವೆ. ಸತ್ತ ಪ್ರಾಣಿಗಳನ್ನು ಅವು ತಿನ್ನುವುದಿಲ್ಲ. ಸಮುದ್ರ ತಳದಲ್ಲಿ 50 ವಿಧದ ಸಮುದ್ರ ಕುದುರೆಗಳಿವೆ. ಅವು 5ರಿಂದ 30 ಸೆಂಟಿಮೀಟರ್ ಉದ್ದ ಇರುತ್ತವೆ. ಬೇಸಿಗೆ ಕಾಲದಲ್ಲಿ ಅವುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ.
ಅವು ನೋಡಲು ಒರಟಾಗಿರುವ ಕಾರಣ ಮೀನು ಹಾಗೂ ಪ್ರಾಣಿಗಳು ಅವುಗಳನ್ನು ತಿನ್ನಲು ಬಯಸುವುದಿಲ್ಲ. ಅದರಿಂದಲೇ ಅವು ಸುರಕ್ಷಿತ ಜೀವಿಗಳು.

No comments:
Post a Comment