ವಿಶ್ವಕಪ್ ಹಾಕಿ ಟೂರ್ನಿಗೆ ಚಾಲನೆ ಲಭಿಸಿದ್ದು 1971 ರಲ್ಲಿ. 1975ರ ವರೆಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಟೂರ್ನಿ ನಡೆದರೆ, ನಾಲ್ಕನೇ ಟೂರ್ನಿ ಮೂರು ವರ್ಷಗಳ ಬಿಡುವಿನ ಬಳಿಕ 1978 ರಲ್ಲಿ ನಡೆಯಿತು. ಆ ಬಳಿಕ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹಾಕಿ ಕ್ರೀಡೆಯ ‘ಮಹಾಮೇಳ’ ನಡೆಯುತ್ತಿದೆ.
ಇದುವರೆಗೆ ನಡೆದಿರುವುದು 11 ವಿಶ್ವಕಪ್ ಟೂರ್ನಿಗಳು. ಚೊಚ್ಚಲ ಟೂರ್ನಿ ಒಳಗೊಂಡಂತೆ ಪಾಕಿಸ್ತಾನ ಒಟ್ಟು ನಾಲ್ಕು ಬಾರಿ ಟ್ರೋಫಿ ಜಯಿಸಿದರೆ, ಹಾಲೆಂಡ್ ಮೂರು ಸಲ ಕಿರೀಟ ಮುಡಿಗೇರಿಸಿಕೊಂಡಿದೆ. ಜರ್ಮನಿ ಎರಡು ಸಲ ಈ ಪ್ರತಿಷ್ಠಿತ ಕಪ್ ತನ್ನದಾಗಿಸಿದರೆ, ಭಾರತ ಹಾಗೂ ಆಸ್ಟ್ರೇಲಿಯಾ ತಲಾ ಒಮ್ಮೆ ಚಾಂಪಿಯನ್ ಆಗಿವೆ.
12ನೇ ವಿಶ್ವಕಪ್ ಟೂರ್ನಿ ನವದೆಹಲಿಯಲ್ಲಿ ಫೆ. 28 ರಿಂದ ಆರಂಭವಾಗಲಿದೆ. ಎರಡನೇ ಬಾರಿ ವಿಶ್ವಕಪ್‌ಗೆ ಅತಿಥ್ಯ ವಹಿಸುವ ಹಕ್ಕು ಭಾರತಕ್ಕೆ ಲಭಿಸಿದೆ. 1982ರ ಟೂರ್ನಿ ಮುಂಬೈ ನಲ್ಲಿ ನಡೆದಿತ್ತು. ಹಿಂದಿನ ವಿಶ್ವಕಪ್‌ಗಳತ್ತ ಒಂದು ನೋಟ...
1971: ಚೊಚ್ಚಲ ವಿಶ್ವಕಪ್‌ಗೆ ಆತಿಥ್ಯ ವಹಿಸುವ ಅವಕಾಶ ಲಭಿಸಿದ್ದು ಸ್ಪೇನ್‌ನ ಬಾರ್ಸಿಲೋನಾ ನಗರಕ್ಕೆ. ಒಟ್ಟು 10 ತಂಡ ಗಳು ಈ ಹಣಾಹಣಿಯಲ್ಲಿ ಪಾಲ್ಗೊಂಡಿದ್ದವು. ಫೈನಲ್‌ನಲ್ಲಿ ಪಾಕಿಸ್ತಾನ 1-0 ರಲ್ಲಿ ಆತಿಥೇಯ ಸ್ಪೇನ್ ತಂಡವನ್ನು ಮಣಿಸಿ ಮೊಟ್ಟಮೊದಲ ‘ಹಾಕಿ ವಿಶ್ವಚಾಂ ಪಿಯನ್’ ಎಂಬ ಗೌರವ ತನ್ನದಾಗಿಸಿತ್ತು. ಭಾರತ ತಂಡ ಕೀನ್ಯಾ ತಂಡವನ್ನು ಮಣಿಸಿ ಮೂರನೇ ಸ್ಥಾನ ಪಡೆದಿತ್ತು. ಅಜಿತ್ ಪಾಲ್ ಸಿಂಗ್ ನೇತೃತ್ವದಲ್ಲಿ ಆಡಿದ್ದ ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದೆನಿ ಸಿತ್ತಾದರೂ, ಅಂತಿಮವಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
1973: ಹಾಲೆಂಡ್‌ನ ಆಮ್‌ಸ್ಟೆಲ್‌ವೀನ್ ನಲ್ಲಿ ಎರಡನೇ ವಿಶ್ವಕಪ್ ಟೂರ್ನಿ ಜರುಗಿತ್ತು. ಫೈನಲ್‌ನಲ್ಲಿ ಹಾಲೆಂಡ್ ಪೆನಾಲ್ಟಿ ಶೂಟೌಟ್ ನಲ್ಲಿ 6-4 ರಲ್ಲಿ ಭಾರತ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಪ್ರಬಲ ಪೈಪೋಟಿ ಕಂಡು ಬಂದ ಪಂದ್ಯದ ನಿಗದಿತ ಹಾಗೂ ಹೆಚ್ಚು ವರಿ ಅವಧಿಯ ಬಳಿಕ ಎರಡೂ ತಂಡಗಳು 2-2 ರಲ್ಲಿ ಸಮಬಲ ಸಾಧಿಸಿದ್ದವು. ಶೂಟೌಟ್ ನಲ್ಲಿ ಅದೃಷ್ಟ ಆತಿಥೇಯ ಹಾಲೆಂಡ್‌ಗೆ ಒಲಿಯಿತು. ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ 1-0 ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿತ್ತು. ಪಶ್ಚಿಮ ಜರ್ಮನಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ 1-0 ರಲ್ಲಿ ಪಾಕಿಸ್ತಾನ ತಂಡವನ್ನು ಹಿಮ್ಮೆಟ್ಟಿಸಿತ್ತು.
(ಮುಂದುವರಿಯಲಿದೆ)

No comments:
Post a Comment